ಭಾನುವಾರ, ಜುಲೈ 6, 2014

ಕನ್ನಡ ಸಾಹಿತ್ಯದ ಹೆಮ್ಮೆ.

         ನಾಡಿನಲ್ಲಿಯೇ ಹೆಸರಾದ ಬಾಗಲಕೋಟೆಯ ಸಾಹಿತ್ಯ ದಿಗ್ಗಜರು.  
 
  ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಾಡಿನಲ್ಲಿಯೇ ತಮ್ಮ ರಚನೆಗಳಿಂದ ಖ್ಯಾತರಾದ ಸಾಹಿತಿಗಳು ನಮ್ಮ ಬಾಗಲಕೋಟೆಯ ತಾಲೂಕಿನವರಾಗಿದ್ದು ಹೆಮ್ಮೆಯ ಸಂಗತಿಯಾಗಿದೆ..ಕಥೆ,ಕಾದಂಬರಿಯಲ್ಲಿ ರೇಖಾ ಕಾಖಂಡಕಿ,ಸಂಶೋಧನೆಯಲ್ಲಿ ಡಾ.ಬಿ.ಕೆ ಹಿರೇಮಠ,ಕಾವ್ಯದಲ್ಲಿ ಸತ್ಯಾನಂದ ಪಾತ್ರೋಟ,ಜಾನಪದದಲ್ಲಿ ಡಾ.ಪ್ರಕಾಶ ಖಾಡೆ,ಹಸ್ತಪ್ರತಿ ಶಾಸ್ತ್ರದಲ್ಲಿ ಡಾ.ವೀರೇಶ ಬಡಿಗೇರ  ನಾಡಿನಲ್ಲಿಯೇ ಖ್ಯಾತರಾಗಿದ್ದಾರೆ .
                                                              ರೇಖಾ ಕಾಖಂಡಕಿ
         ಬಾಗಲಕೋಟೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿರುವ ರೇಖಾ ಕಾಖಂಡಕಿ ಕನ್ನಡದ ಅತ್ಯಂತ ಪ್ರಮುಖ ಲೇಖಕಿಯರಲ್ಲಿ ಒಬ್ಬರು.ಅವರ ಮೊದಲ ‘ಕೋಟೆ’ ಕಾದಂಬರಿಯು ಬಾಗಲಕೋಟೆಯ ಬದುಕನ್ನು ಚಿತ್ರಿಸುತ್ತದೆ.’ಅರುಣ ರಾಗ’ ಚಲನಚಿತ್ರವಾಗಿ ಹೆಸರಾದರೆ, ಇದ್ದು ಇಲ್ಲದ ಸಂಬಂಧಗಳು ಕಾದಂಬರಿಯು ‘ಮಹಾನವಮಿ’ ಹೆಸರಿನಲ್ಲಿ ಈ ಟಿ,ವಿ,ಯಲ್ಲಿ ಧಾರಾವಾಹಿಯಾಗಿ ಜನಪ್ರಿಯವಾಯಿತು.ಬಂಧನ,ಹೊಸ ಹೆಜ್ಜೆ,ದತ್ತು ಮಾಸ್ತರ,ಬದುಕು ಪಾರಿಜಾತದ ಹೂವಲ್ಲ ರೇಖಾ ಅವರ ಜನಪ್ರಿಯ ಕಾದಂಬರಿಗಳು.

                                                              ಡಾ.ಸತ್ಯಾನಂದ ಪಾತ್ರೋಟ       
             ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಡಾ.ಸತ್ಯಾನಂದ ಪಾತ್ರೋಟರು ಜಾಜಿ ಮಲ್ಲಿಗೆ ಕವನ ಸಂಕಲನದಿಂದ ಗುರುತಿಸಿಕೊಂಡರು.’ಬಡವನಾದರೆ ಏನು ಪ್ರಿಯೆ ಕೈ ತುತ್ತು ಉಣಿಸುವೆ’ ಈ ಸಾಲುಗಳೇ ಡಾ.ಪಾತ್ರೋಟರ ಕಾವ್ಯ ಧೋರಣೆಯನ್ನು ಬಿಂಬಿಸುತ್ತವೆ.ಕನ್ನಡ ದಲಿತ ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಡಾ.ಪಾತ್ರೋಟರ;ಕರಿಯ ಕಟ್ಟಿದ ಕವನ,ನನ್ನ ಕನಸಿನ ಹುಡುಗಿ,ಕರಿ ನೆಲೆದ ಕಲೆಗಳು ಮುಖ್ಯ ಕವನಸಂಕಲನಗಳು.

                                                                   ಡಾ.ಪ್ರಕಾಶ ಖಾಡೆ
          ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನದಲ್ಲಿ ಹೆಸರಾದವರು ಡಾ.ಪ್ರಕಾಶ ಖಾಡೆ. ತಂದೆ ಜಿ.ಬಿ.ಖಾಡೆ ಅವರು ಹಾಕಿಕೊಟ್ಟ ಜಾನಪದ ಅಧ್ಯಯನದ ಪರಂಪರೆಯನ್ನು ಮುಂದುವರೆಸಿದ್ದಾರೆ.ಅಳಿದು ಹೋಗುತ್ತಿರುವ ಜನಪದ ಸಾಹಿತ್ಯ ಕಲೆ ಮತ್ತು ಸಂಸ್ಕøತಿಯನ್ನು ತಮ್ಮ   ಕೃತಿಗಳ ಮೂಲಕ ಕಟ್ಟಿಕೊಡುವ, ದಾಖಲಿಸುವ ಕಾಯಕವನ್ನು ನಿರಂತರವಾಗಿಟ್ಟುಕೊಂಡು ಬಂದಿದ್ದಾರೆ.ಕೃಷ್ಣಾ ತೀರದ ಮುಳುಗಡೆ ಪ್ರದೇಶದ ಹಳ್ಳಿಗಳಲ್ಲಿ ಸುತ್ತಾಡಿ ತಂದ ಒಗಟುಗಳನ್ನು ‘ಕೃಷ್ಣಾ ತೀರದ ಜನಪದ ಒಗಟುಗಳು’ ಸಂಕಲನ ಜನಪ್ರಿಯವಾಗಿದೆ. ಇವರ ‘ನೆಲಮೂಲ ಸಂಸ್ಕøತಿ’ ಕೃತಿಯಲ್ಲಿ ಕನ್ನಡ ಲಾವಣಿ,ತತ್ವಪದ,ರಿವಾಯತ ಪದ,ಪಾರಿಜಾತ,ಆಟ್ಯಾ ಪಾಟ್ಯಾ,ಮಲ್ಲಕಂಬ,ಗರದಿ ಗಮ್ಮತ್ತು,ಓಕಳಿ,ಕಂಬಳಿ,ಮಾಟ ಮಂತ್ರ ಮೋಡಿಯಾಟ,ಜೋಕುಮಾರ,ಜೋಗರಾಣಿ ಹೀಗೆ ವೈವಿಧ್ಯ ವಿಷಯಗಳನ್ನು ಹೊತ್ತ ಜನಪದ ಲೇಖನಗಳಿವೆ. 2005 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ’ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾದರು   ‘ಜನಪದ ಕೋಗಿಲೆ ಗೌರಮ್ಮ ಚಲವಾದಿ”, ‘ಜಾನಪದ ಲೋಕ’ ಹಾಗು ‘ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು’ ಇವರ ಜನಪದ ಕೃತಿಗಳು.
                                                                 ಡಾ.ವೀರೇಶ ಬಡಿಗೇರ
          ಕನ್ನಡ ಹಸ್ತಪ್ರತಿ ಶಾಸ್ತ್ರದಲ್ಲಿ ಡಾ.ವೀರೇಶ ಬಡಿಗೇರ ಖ್ಯಾತರಾಗಿದ್ದಾರೆ.ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರವಿಭಾಗದ ಪ್ರಾಧ್ಯಾಪಕರಾಗಿ ನಾಡಿನ ಅನೇಕ ಕಡೆ ಸುತ್ತಾಡಿ ಹಸ್ತಪ್ರತಿಗಳ ಸಂಗ್ರಹ ಅಧ್ಯಯನ ಕೈಕೊಂಡು ನಾಡಿನ ಪರಂಪರೆ ಅಮೂಲ್ಯ ಆಸ್ತಿಯನ್ನು ಕಾಯ್ದುಕೊಂಡು ಬರುವದರೊಂದಿಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಿದ್ದಾರೆ.ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು,ಕನ್ನಡ ಹಸ್ತಪ್ರತಿಗಳ ಬಹು ಪಠ್ಯೀಯ ನೆಲೆಗಳು,ಕನ್ನಡ ಮೋಡಿಲಿಪಿ ಸಂರಚನೆ ಮತ್ತು ಸಂವರ್ಧನೆ ಇವರ ಪ್ರಮುಖ ಕೃತಿಗಳು. ಇಂದಿಗೂ ತಮ್ಮ ರಚನೆಗಳಿಂದ ಕನ್ನಡ ಸಾರಸ್ವತ ಲೋಕ ಬೆಳಗುತ್ತಿರುವ ಈ ಸಾಧಕರಿಗೆ ನಮ್ಮ ಅಭಿನಂದನೆಗಳು.   (ಕೃಪೆ : ಸೂಪರ್ ಟ್ವೆಮ್ಸ್,ಬಾಗಲಕೋಟ-5.7.2014)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ