ಭಾನುವಾರ, ಜುಲೈ 6, 2014

ಕನ್ನಡ ಸಾಹಿತ್ಯದ ಹೆಮ್ಮೆ.

         ನಾಡಿನಲ್ಲಿಯೇ ಹೆಸರಾದ ಬಾಗಲಕೋಟೆಯ ಸಾಹಿತ್ಯ ದಿಗ್ಗಜರು.  
 
  ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಾಡಿನಲ್ಲಿಯೇ ತಮ್ಮ ರಚನೆಗಳಿಂದ ಖ್ಯಾತರಾದ ಸಾಹಿತಿಗಳು ನಮ್ಮ ಬಾಗಲಕೋಟೆಯ ತಾಲೂಕಿನವರಾಗಿದ್ದು ಹೆಮ್ಮೆಯ ಸಂಗತಿಯಾಗಿದೆ..ಕಥೆ,ಕಾದಂಬರಿಯಲ್ಲಿ ರೇಖಾ ಕಾಖಂಡಕಿ,ಸಂಶೋಧನೆಯಲ್ಲಿ ಡಾ.ಬಿ.ಕೆ ಹಿರೇಮಠ,ಕಾವ್ಯದಲ್ಲಿ ಸತ್ಯಾನಂದ ಪಾತ್ರೋಟ,ಜಾನಪದದಲ್ಲಿ ಡಾ.ಪ್ರಕಾಶ ಖಾಡೆ,ಹಸ್ತಪ್ರತಿ ಶಾಸ್ತ್ರದಲ್ಲಿ ಡಾ.ವೀರೇಶ ಬಡಿಗೇರ  ನಾಡಿನಲ್ಲಿಯೇ ಖ್ಯಾತರಾಗಿದ್ದಾರೆ .
                                                              ರೇಖಾ ಕಾಖಂಡಕಿ
         ಬಾಗಲಕೋಟೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿರುವ ರೇಖಾ ಕಾಖಂಡಕಿ ಕನ್ನಡದ ಅತ್ಯಂತ ಪ್ರಮುಖ ಲೇಖಕಿಯರಲ್ಲಿ ಒಬ್ಬರು.ಅವರ ಮೊದಲ ‘ಕೋಟೆ’ ಕಾದಂಬರಿಯು ಬಾಗಲಕೋಟೆಯ ಬದುಕನ್ನು ಚಿತ್ರಿಸುತ್ತದೆ.’ಅರುಣ ರಾಗ’ ಚಲನಚಿತ್ರವಾಗಿ ಹೆಸರಾದರೆ, ಇದ್ದು ಇಲ್ಲದ ಸಂಬಂಧಗಳು ಕಾದಂಬರಿಯು ‘ಮಹಾನವಮಿ’ ಹೆಸರಿನಲ್ಲಿ ಈ ಟಿ,ವಿ,ಯಲ್ಲಿ ಧಾರಾವಾಹಿಯಾಗಿ ಜನಪ್ರಿಯವಾಯಿತು.ಬಂಧನ,ಹೊಸ ಹೆಜ್ಜೆ,ದತ್ತು ಮಾಸ್ತರ,ಬದುಕು ಪಾರಿಜಾತದ ಹೂವಲ್ಲ ರೇಖಾ ಅವರ ಜನಪ್ರಿಯ ಕಾದಂಬರಿಗಳು.

                                                              ಡಾ.ಸತ್ಯಾನಂದ ಪಾತ್ರೋಟ       
             ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಡಾ.ಸತ್ಯಾನಂದ ಪಾತ್ರೋಟರು ಜಾಜಿ ಮಲ್ಲಿಗೆ ಕವನ ಸಂಕಲನದಿಂದ ಗುರುತಿಸಿಕೊಂಡರು.’ಬಡವನಾದರೆ ಏನು ಪ್ರಿಯೆ ಕೈ ತುತ್ತು ಉಣಿಸುವೆ’ ಈ ಸಾಲುಗಳೇ ಡಾ.ಪಾತ್ರೋಟರ ಕಾವ್ಯ ಧೋರಣೆಯನ್ನು ಬಿಂಬಿಸುತ್ತವೆ.ಕನ್ನಡ ದಲಿತ ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಡಾ.ಪಾತ್ರೋಟರ;ಕರಿಯ ಕಟ್ಟಿದ ಕವನ,ನನ್ನ ಕನಸಿನ ಹುಡುಗಿ,ಕರಿ ನೆಲೆದ ಕಲೆಗಳು ಮುಖ್ಯ ಕವನಸಂಕಲನಗಳು.

                                                                   ಡಾ.ಪ್ರಕಾಶ ಖಾಡೆ
          ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನದಲ್ಲಿ ಹೆಸರಾದವರು ಡಾ.ಪ್ರಕಾಶ ಖಾಡೆ. ತಂದೆ ಜಿ.ಬಿ.ಖಾಡೆ ಅವರು ಹಾಕಿಕೊಟ್ಟ ಜಾನಪದ ಅಧ್ಯಯನದ ಪರಂಪರೆಯನ್ನು ಮುಂದುವರೆಸಿದ್ದಾರೆ.ಅಳಿದು ಹೋಗುತ್ತಿರುವ ಜನಪದ ಸಾಹಿತ್ಯ ಕಲೆ ಮತ್ತು ಸಂಸ್ಕøತಿಯನ್ನು ತಮ್ಮ   ಕೃತಿಗಳ ಮೂಲಕ ಕಟ್ಟಿಕೊಡುವ, ದಾಖಲಿಸುವ ಕಾಯಕವನ್ನು ನಿರಂತರವಾಗಿಟ್ಟುಕೊಂಡು ಬಂದಿದ್ದಾರೆ.ಕೃಷ್ಣಾ ತೀರದ ಮುಳುಗಡೆ ಪ್ರದೇಶದ ಹಳ್ಳಿಗಳಲ್ಲಿ ಸುತ್ತಾಡಿ ತಂದ ಒಗಟುಗಳನ್ನು ‘ಕೃಷ್ಣಾ ತೀರದ ಜನಪದ ಒಗಟುಗಳು’ ಸಂಕಲನ ಜನಪ್ರಿಯವಾಗಿದೆ. ಇವರ ‘ನೆಲಮೂಲ ಸಂಸ್ಕøತಿ’ ಕೃತಿಯಲ್ಲಿ ಕನ್ನಡ ಲಾವಣಿ,ತತ್ವಪದ,ರಿವಾಯತ ಪದ,ಪಾರಿಜಾತ,ಆಟ್ಯಾ ಪಾಟ್ಯಾ,ಮಲ್ಲಕಂಬ,ಗರದಿ ಗಮ್ಮತ್ತು,ಓಕಳಿ,ಕಂಬಳಿ,ಮಾಟ ಮಂತ್ರ ಮೋಡಿಯಾಟ,ಜೋಕುಮಾರ,ಜೋಗರಾಣಿ ಹೀಗೆ ವೈವಿಧ್ಯ ವಿಷಯಗಳನ್ನು ಹೊತ್ತ ಜನಪದ ಲೇಖನಗಳಿವೆ. 2005 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ’ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾದರು   ‘ಜನಪದ ಕೋಗಿಲೆ ಗೌರಮ್ಮ ಚಲವಾದಿ”, ‘ಜಾನಪದ ಲೋಕ’ ಹಾಗು ‘ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು’ ಇವರ ಜನಪದ ಕೃತಿಗಳು.
                                                                 ಡಾ.ವೀರೇಶ ಬಡಿಗೇರ
          ಕನ್ನಡ ಹಸ್ತಪ್ರತಿ ಶಾಸ್ತ್ರದಲ್ಲಿ ಡಾ.ವೀರೇಶ ಬಡಿಗೇರ ಖ್ಯಾತರಾಗಿದ್ದಾರೆ.ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರವಿಭಾಗದ ಪ್ರಾಧ್ಯಾಪಕರಾಗಿ ನಾಡಿನ ಅನೇಕ ಕಡೆ ಸುತ್ತಾಡಿ ಹಸ್ತಪ್ರತಿಗಳ ಸಂಗ್ರಹ ಅಧ್ಯಯನ ಕೈಕೊಂಡು ನಾಡಿನ ಪರಂಪರೆ ಅಮೂಲ್ಯ ಆಸ್ತಿಯನ್ನು ಕಾಯ್ದುಕೊಂಡು ಬರುವದರೊಂದಿಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಿದ್ದಾರೆ.ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು,ಕನ್ನಡ ಹಸ್ತಪ್ರತಿಗಳ ಬಹು ಪಠ್ಯೀಯ ನೆಲೆಗಳು,ಕನ್ನಡ ಮೋಡಿಲಿಪಿ ಸಂರಚನೆ ಮತ್ತು ಸಂವರ್ಧನೆ ಇವರ ಪ್ರಮುಖ ಕೃತಿಗಳು. ಇಂದಿಗೂ ತಮ್ಮ ರಚನೆಗಳಿಂದ ಕನ್ನಡ ಸಾರಸ್ವತ ಲೋಕ ಬೆಳಗುತ್ತಿರುವ ಈ ಸಾಧಕರಿಗೆ ನಮ್ಮ ಅಭಿನಂದನೆಗಳು.   (ಕೃಪೆ : ಸೂಪರ್ ಟ್ವೆಮ್ಸ್,ಬಾಗಲಕೋಟ-5.7.2014)

ಗುರುವಾರ, ಮೇ 29, 2014

ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


        ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


ಇಳಕಲ್ಲ. 22.05.2014-
ಬದುಕು ಸುಂದರ ಮತ್ತು ಅರ್ಥಪೂರ್ಣವಾಗಿ ರೂಪುಗೊಳ್ಳಲು ಕಲಾಕೃತಿಗಳು ನಮ್ಮ ನಡುವೆ ಮಾಧ್ಯಮವಾಗಿ ನಿಲ್ಲುತ್ತವೆ ಎಂದು  ಸಾಹಿತಿ ಡಾ.ಪ್ರಕಾಶ ಖಾಡೆ  ಹೇಳಿದರು.ನಗರದ ಗವಿಮಠ ಲಲಿತಕಲಾ ಮಹಾಸಂಸ್ಥಾನದ ಚಿತ್ರಕಲಾ ಸ್ನಾತಕೋತ್ತರ ಕೇಂದ್ರ ಹಮ್ಮಿಕೊಂಡಿದ್ದ ಲಕ್ಷ್ಮಣ ಬದಾಮಿ ಅವರ ‘ರೂಪ ನಿರೂಪ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಕಲಾವಿಮರ್ಶಕರ ಕೊರತೆಯನ್ನು ಲಕ್ಷ್ಮಣ ಬದಾಮಿ ಅವರು ತುಂಬುವ ಮೂಲಕ ‘ರೂಪ ನಿರೂಪ’ ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ ಎಂದೂ ಅವರು ಹೇಳಿದರು. ಜಿಲ್ಲೆಯಲ್ಲಿ ಅರಂಭಿಸಲು ಉದ್ದೇಶಿಸಿರುವ ಲಲಿತಕಲಾ ವಿಶ್ವವಿದ್ಯಾಲಯವನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಆರಂಭಿಸುವ ಮೂಲಕ ಬಾದಾಮಿ ಪರಿಸರದ ಮೂಲಕ ನಮ್ಮ ಭಾಗದ ಕಲೆ,ಸಂಸ್ಕøತಿಯನ್ನು ವಿಶ್ವಮಾನ್ಯಗೋಳಿಸಬೇಕಾಗಿದೆ ಎಂದೂ ಡಾ.ಖಾಡೆ ಹೇಳಿದರು

.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿಯ ಚಿತ್ರಕಲಾ ಅಧಿಕಾರಿ ಮಹಾಂತೇಶ ಕಂಠಿ ಚಿತ್ರಕಲೆಯೂ ಸೇರಿದಂತೆ ಲಲಿತಕಲೆಯ ಎಲ್ಲ ಅಧ್ಯಯನಕ್ಕೆ ಈಗ ತುಂಬಾ ಅವಕಾಶಗಳಿದ್ದು ಹೊಸಬರು ಈ ಕಡೆಗೆ ಆಕರ್ಷಿತರಾಬೇಕೆಂದರು.ವಕೀಲರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಬೃಂಗಿಮಠ ಮಾತನಾಡಿ ಕಲಾತ್ಮಕ ಚಿತ್ರಬರಹಗಳು ಮಾಧ್ಯಮದ ಮೂಲಕ ಜನರ ಅಭಿಪ್ರಾಯಗಳನ್ನು ತುಂಬಾ ಸಮರ್ಥವಾಗಿ ರೂಪಿಸುತ್ತಿವೆ ಎಂದರು.ಬೆಳಗಾವಿ ವಿಭಾಗದ ಚಿತ್ರಕಲಾ ಅಧಿಕಾರಿ ಹೇಮಂತ ದೇಶಪಾಂಡೆ,ಬೆಂಗಳೂರು ಆಯುಕ್ತರ ಕಛೇರಿಯ ಜೆ.ಎಂ.ಜಂಗೀ.ಗುಲ್ಬರ್ಗಾ ವಿಭಾಗದ ಟಿ.ದೇವೇಂದ್ರಪ್ಪ ಕೃತಿಕಾರ ಲಕ್ಷ್ಮಣ ಬದಾಮಿ ಮೊದಲಾದವರು ವೇದಿಕೆ ಮೇಲಿದ್ದರು.ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಬರುವ ಅಕ್ಟೋಬರದಲ್ಲಿ ಇಲಕಲ್ಲದಲ್ಲಿ ಕಲಾ ಸಮಾವೇಶ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವದ ಅಂಗವಾಗಿ ಸತ್ಕರಿಸಿ ಗೌರವಿಸಲಾಯಿತು.ಆರ್.ಬಿ.ಹುಣಿಶ್ಯಾಳ ಸ್ವಾಗತಿಸಿದರು.ಬೆಂಗಳೂರಿನ ರಾಮಚಂದ್ರರಾವ್ ನಿರೂಪಿಸಿದರು.

                                        ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವ

*****

ಡಾ.ಪ್ರಕಾಶ ಖಾಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಪುಂಡಲೀಕ ಹಾಲಂಬಿ

ಸಂಗಮ ಸಮಾಗಮ'

ಡಾ.ಪ್ರಕಾಶ ಖಾಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಪುಂಡಲೀಕ ಹಾಲಂಬಿ


 

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರು ಬಾಗಲಕೋಟ ಜಿಲ್ಲೆ ಕೂಡಲ ಸಂಗಮಕ್ಕೆ ಆಗಮಿಸಿದಾಗ ಕೂಡಲ ಸಂಗಮದ ಪ್ರವಾಸಿ ಮಂದಿರದಲ್ಲಿ ಡಾ.ಪ್ರಕಾಶ ಖಾಡೆ ಅವರು ಶ್ರೀ ಎಸ್.ಜಿ.ಕೋಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಂಪಾದಿಸಿದ 'ಸಂಶೋಧನಾ ಸೋಪಾನಗಳು' ಕೃತಿ ಬಿಡುಗಡೆ ಮಾಡಿದರು.ಅವರೊಂದಿಗಿನ ಸ್ಮರಣೀಯ ಸಂದರ್ಭಗಳು :


ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29 ರಂದು ಜರುಗಿತು.. ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ.ಕೋಟಿ,ಗೌರವ ಕಾರ್ಯದರ್ಶಿಗಳಾಗಿರುವ ಡಾ.ಪ್ರಕಾಶ ಖಾಡೆ,ಡಾ.ಅಶೋಕ ನರೋಡೆ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕೃತಿಯನ್ನು ಕಸಬಾ ಜಂಬಗಿಯ ನಿರ್ಮಲ ಪ್ರಕಾಶನ ಪ್ರಕಟಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಬಿಡುಗಡೆ ಮಾಡಿದರು.
ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರದಲ್ಲಿ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ,ಶ್ರೀಮತಿ ಹಾಲಂಬಿ,ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕಟಗಿಹಳ್ಳಿಮಠ ,ಸಹಕಾರಿ ಧುರೀಣ ಎಲ್.ಎಂ.ಪಾಟೀಲ,ನ್ಯಾಯವಾದಿ ತಾತಾಸಾಹೇಬ ಬಾಂಗಿ ,ಬಿ.ಪಿ.ಹಿರೇಸೋಮಣ್ಣವರ ,ಕೃಷ್ಣಗೌಡರ,ಶರಣು ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.
ಜಮಖಂಡಿಯ ಚಿಂತನ ವೇದಿಕೆ ಮತ್ತು ನಿರ್ಮಲ ಪ್ರಕಾಶನ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರ್ಜುನ ಕೋರಟಕರ ಮತ್ತು ಪ್ರಕಾಶಕ ಸದಾಶಿವ ಮಾಳಿ ಸ್ವಾಗತ ಕೋರಿ ವಂದಿಸಿದರು.

ಶುಕ್ರವಾರ, ಮೇ 23, 2014

ಸುಮಧುರ ಕ್ಷಣಗಳು -ಸುರೇಶ ರಾಜಮಾನೆ.

ಮಧುರಖಂಡಿಯ ಸುಮಧುರ ಕ್ಷಣಗಳು

 
 
ಆಕಾಶವೇ ಚಪ್ಪರ ಭೂಮಿಯೇ ಮಂಟಪ
ಗಿಡಮರಗಳೇ ತಳಿರು ತೋರಣ
ಸಮಾನ ಮನಸ್ಸುಳ್ಳ
ಸಾತ್ವಿಕ ಹೃದಯಗಳೇ
ಸಮಾರಂಭದ ಜೀವಾಳ
...
ಪುಸ್ತಕದ ಸುಂದರ ಮುಖಬಾವ
ಸುಮಧುರ ಬರಹ
ಮಧುರಖಂಡಿಯ 

ಸಮಾರಂಬಕ್ಕೆ ಹೋದ
ನನಗೆ
ಖುಷಿಯೋ ಖುಷಿ.

ಹತ್ತಿರದಿಂದ ನೋಡಿದ ನನಗೆ
ಅವರ
 ಅಂತರಾಳವನ್ನು ಅರಿಯುವ
ಅವಕಾಶ ನೀಡಿತು
ಈ ಪುಸ್ತಕದೊಳಗಿನ ಚಿತ್ರಣ
ತಿಳಿಸಿತು ಖಾಡೆ ಸರ್ ಜೀವನ

ಸಾಧಕರ ಸಾಲಿನಲಿ ನಮ್ಮವರು
ಸಂತೋಷವಾಯ್ತು
ಇವರೇ ಮೊದಲಿಗರು.

ಅದ್ಭುತವಾಗಿತ್ತು ಸಮಾರಂಭ
ಭಾಗವಹಿಸಿದ್ದಕ್ಕೆ
ನನಗಂತು ಆನಂದ

ಗವಿಮಠರ ಗರಡಿಯಲಿ
ಕವಿಗಳ ಮೇಳ
ಸ್ಮರಿಸಿದ ಜೀವಗಳೊಂದಿಗೆ
ಸ್ಮರಣೀಯ ಕ್ಷಣಗಳ
ಸಮ್ಮೇಳನ

ಡಾ. ಖಾಡೆ ಸರ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ
ಹಾಗೂ ಅವರ ಬಗ್ಗೆ ಸಮಗ್ರ ಚಿತ್ರಣ ನೀಡಿದ ಶ್ರೀ ಗುರುರಾಜ ಲೂತಿ ಸರ್ ಅವರ ಈ ಮಾಲಿಕೆಯ ಪ್ರಥಮ ಕೃತಿ
ಕೈಸೇರಿದಾಗ ನಾ ಕಣ್ಣಾಡಿಸಿದಾಗ ಕಂಡ ಡಾ. ಪ್ರಕಾಶ ಗ.ಖಾಡೆ ಸರ್ ನಿಜವಾಗ್ಲೂ ಸಾಧಕರಲ್ಲಿ ಮೊದಲಿಗರಾದದ್ದಕ್ಕೆ ನನಗಂತೂ ಹೆಮ್ಮೆಯನಿಸುತ್ತದೆ ಇದು ನಾವೆಲ್ಲ ಹೆಮ್ಮೆ ಪಡಲೇಬೇಕಾದ ವಿಷಯ..
 
ವಯಕ್ತಿಕವಾಗಿ ಡಾ.ಖಾಡೆ ಸರ್ ನನಗೆ ಪರಿಚಯವಾಗಿದ್ದು ನನ್ನ ಅದೃಷ್ಟ ಸಾಹಿತಿಗಳ ನಿಜವಾದ ಬಗೆ ಹೇಗಿರತ್ತೆ ಅನ್ನೋದನ್ನ ಅವರಲ್ಲಿ ಕಂಡಿದ್ದೆನೆ. ನನ್ನ ಜೀವನದಲ್ಲಿ ಮೊದಲನೆಯದಾಗಿ ಪರಿಚಯರಾದವರು ಸಾಧಕ ಸಾಹಿತಿಗಳಾದ ಡಾ.ಖಾಡೆ ಸರ್

ಎನ್ನುವದಕ್ಕೆ ಹೆಮ್ಮೆ ಪಡುತ್ತೆನೆ.
 
ಧನ್ಯವಾದಗಳೊಂದಿಗೆ
 
 =ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.

ಶನಿವಾರ, ಮಾರ್ಚ್ 8, 2014

ಬಾಗಲಕೋಟೆ : ನವನವೀನ ನಗರ

                ಬಾಗಲಕೋಟೆ : ನವನವೀನ ನಗರ

         ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸೇರಿಕೊಂಡು ಕೋಟೆಯ ಬಾಗಿಲಿಗೆ ಹಿರಿ ಹೊಳೆಯ ಬಾಗಿನ ಅರ್ಪಿಸಿದಂತಾಗಿದೆ.ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು.ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.ಅಂತೆಯೇ ಇಲ್ಲಿನ ಭಜಂತ್ರಿಯವರು ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು. 1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.
  ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕøತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆ ಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು  ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆಯಾಗಲಿದ್ದು ,ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗುತ್ತಿದೆ.ಮುಳುಗಡೆ ಊರಿನ ಹಿಂದಿನ ಸಂಸ್ಕøತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು ,ಓಕಳಿ ,ಹೋಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.
–ಡಾ.ಪ್ರಕಾಶ ಗ.ಖಾಡೆ